ಪಂಢರಿಬಾಯಿ, ಆರ್
(1928- ) ಕನ್ನಡಿಗರಿಗೆ ಸುಪರಿಚಿತರಾಗಿದ್ದ ನಟಿ ಪಂಢರಿಬಾಯಿ ಭಾರತೀಯ ಚಿತ್ರರಂಗದ ಹಿರಿಯ ತಾರೆ. ತಂದೆ ರಂಗವಿಠಲ, ಕೀರ್ತನಕಾರರು, ತಾಯಿ ಕಾವೇರಿಬಾಯಿ ಶಿಕ್ಷಕಿ. ಜನ್ಮ ಭಟ್ಕಳದಲ್ಲಿ (1928ರ ಸೆಪ್ಟೆಂಬರ್ 18ರಂದು). ಪಂಢರಿಬಾಯಿಯವರ ಜನ್ನನಾಮ ಗೀತಾ. ಅದೊಮ್ಮೆ ಪಂಢರಪುರಕ್ಕೆ ಹೋಗಿ ಬಂದ ರಂಗರಾಯರು, ವಿಠಲನ ಮೇಲಿನ ಭಕ್ತಿಯಿಂದ ಮಗಳಿಗೆ ಪಂಢರಿಬಾಯಿ ಎಂದು ಕರೆದರು. ಅದೇ ಶಾಶ್ವತವಾಯಿತು. ಪಂಢರಿಬಾಯಿ ಕೂಡ ಪಾಂಡುರಂಗನ ಭಕ್ತೆಯಾದರು. ಮದರಾಸಿನ ಕೊಡಬಾಕ್ನಂನಲ್ಲಿ ತಮ್ಮ ನಿವಾಸದ ಪಕ್ಕದಲ್ಲೇ ಪಾಂಡುರಂಗನಿಗೆ ಗುಡಿ ಕಟ್ಟಿಸಿದರು. ತಮ್ಮ ಬದುಕಿನ ಕೊನೆಯ ತನಕ ಅಲ್ಲಿ ವಾಸ ಮಾಡಿದರು. ಇವರ ಸೋದರ ವಿಮಲಾನಂದದಾಸರೂ ನಟ ಹಾಗೂ ಕೀರ್ತನಕಾರರು. ಇವರ ತಂಗಿ ಮೈನಾವತಿಯವರೂ ಕನ್ನಡ ಚಿತ್ರ ಜಗತ್ತಿನಲ್ಲಿ ನಾಯಕಿ ನಟಿಯಾಗಿ ಬೆಳಗಿದವರೇ. ಬಾಲ್ಯದಿಂದಲೂ ತಂದೆಯಿಂದ ಪ್ರಭಾವಿತರಾದ ಪಂಢರೀಬಾಯಿಯವರು ಕೀರ್ತನಕಲೆಯಲ್ಲಿ ಪರಿಣತರು. ಸೋದರ ವಿಮಲಾನಂದದಾಸರ ``ಆದರ್ಶ ನಾಟಕ ಸಭಾ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟಿಯೊಬ್ಬರು ಗೈರುಹಾಜರಾದಾಗ ಆ ಪಾತ್ರವನ್ನು ನಿರ್ವಹಿಸಲು ಪಂಢರಿಬಾಯಿಯವರು ಬಣ್ಣ ಹಚ್ಚಿಕೊಳ್ಳಬೇಕಾಯಿತು. ಅದೇ ಅವರ ರಂಗಭೂಮಿ ಪ್ರವೇಶಕ್ಕೆ ಕಾರಣವಾಯಿತು. ಬೆಂಗಳೂರಿನ ವರದಾಚಾರ್ ಮೆಮೊರಿಯಲ್ ಸಂಸ್ಥೆಯ ನಾಟಕಗಳಲ್ಲೂ ಅಭಿನಯಿಸುತ್ತಿದ್ದರು.

1943ರಲ್ಲಿ ಪಿಟೀಲು ಟಿ.ಚೌಡಯ್ಯನವರು ಅಭಿನಯಿಸಿದ ``ವಾಣಿ ಚಿತ್ರದಲ್ಲಿ ಹದಿನೈದರ ಹರೆಯದ ಪಂಢರಿಬಾಯಿಯವರು ನಟಿಸಿದರು. ದಶಕದ ನಂತರ ``ಗುಣಸಾಗರಿ'' ಚಿತ್ರದಲ್ಲಿ ಗಾಯಕನಟ ಸಿ.ಹೊನ್ನಪ್ಪಭಾಗವತರ್ ಜೊತೆ ನಾಯಕಿಯಾಗಿ ನಟಿಸಿದರು. ತಮಿಳು, ತೆಲಗು, ಹಿಂದಿ ಭಾಷೆಗಳನ್ನು ಕಲಿತರು. ದಕ್ಷಣ ಭಾರತದಲ್ಲಿ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ಮೆರೆದರು. ಶಿವಾಜಿ ಗಣೇಶನ್ ಅವರ ಮೊದಲ ಚಿತ್ರ `ಪರಾಶಕ್ತಿ ಚಿತ್ರದ ನಾಯಕಿಯಾಗಿ ನಟಿಸಿದ ಹಿರಿಮೆ ಇವರದು. 

1954ರಲ್ಲಿ ರಾಜಕುಮಾರ್ ಅವರ ಪ್ರಥಮ ಚಿತ್ರ ``ಬೇಡರ ಕಣ್ಣಪ್ಪ ದಲ್ಲಿ ರಾಜ್ ಅವರಿಗೆ ನಾಯಕಿಯಾದರು. ತೆಲುಗು, ತಮಿಳು, ಹಿಂದಿ, ಮಲಯಾಳಂ, ತುಳು, ಕೊಂಕಣಿ ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ, ಅನಂತರ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿದ ಪಂಢರಿಬಾಯಿ ಚಿತ್ರಜಗತ್ತಿನಲ್ಲಿ ``ಅಮ್ಮನಾಗಿಯೇ ಪ್ರಸಿದ್ಧರು. ``ಭಾಬಿ ಹಿಂದಿ ಚಿತ್ರದಲ್ಲಿ ನಟಿಸಿ ಎಲ್ಲರ ಪಾಲಿನ ಭಾಬಿಯೂ ಆದರು. ಭಾರತೀಯ ಸಂಸ್ಕøತಿ ಪ್ರತಿಪಾದಿಸುವ ಅಮ್ಮನಾಗಿದ್ದ ಪಂಢರಿಬಾಯಿಯವರಿಗೆ ಬೆಳ್ಳಿತೆರೆಯಲ್ಲಿ ಜೊತೆಯಾಗಿದ್ದವರು ಹಿರಿಯ ನಟ ಅಶ್ವತ್ಥ್ ಈ ನಟಿ ಎಷ್ಟು ಜನಪ್ರಿಯವಾಗಿತ್ತೆಂದರೆ ನಿಜ ಬದುಕಿನಲ್ಲಿಯೂ ಇವರು ದಂಪತಿಗಳೆಂದು ಬಹಳಷ್ಟು ಮಂದಿ ನಂಬಿದ್ದಾರೆ.   ಚಲನಚಿತ್ರರಂಗದ ಹಿರಿಯ ನಟರಾದ ಡಾ|| ರಾಜಕುಮಾರ್, ಎಂ.ಜಿ.ಆರ್. ಶಿವಾಜಿ ಗಣೇಶನ್, ಕಮಲಹಾಸನ್, ರಜನೀಕಾಂತ್, ರಾಜೇಶ್ ಖನ್ನಾ, ಕೃಷ್ಣ ಮೊದಲಾದ ನಟರೊಂದಿಗೆ ಅಭಿನಯಿಸಿದ ಹಿರಿಮೆ ಇವರದು. 

ಪಾಂಡುರಂಗಾ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ ಪಂಢರಿಬಾಯಿಯವರು ಆ ಲಾಂಛನದಡಿಯಲ್ಲಿ `ಸಂತ ಸಖು, `ಅನ್ನಪೂರ್ಣ `ತೇಜಸ್ವಿನಿ `ಅನುರಾಧ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ಕನ್ನಡದಲ್ಲಿ ನಾಯಕಿಯಾಗಿ, ಪೋಷಕನಟಿಯಾಗಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಪಂಢರಿಬಾಯಿಯವರು ತಾವು ಗಳಿಸಿದ್ದನ್ನೆಲ್ಲಾ ಕನ್ನಡ ಚಿತ್ರ ನಿರ್ಮಾಣದಲ್ಲಿ ಸುರಿದು ಕಳೆದುಕೊಂಡರು. `ಶ್ರೀಕೃಷ್ಣ ಚೈತನ್ಯ ನಾಟಕ ಸಭಾ ಸಂಸ್ಥೆಯ ಮೂಲಕ ಕರ್ನಾಟಕಾದ್ಯಂತ ಪ್ರವಾಸ ಮಾಡಿ, ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಟಿ ಸಹಸ್ರನಾಮಂ ಅವರ `ಸೇವಾ ಸ್ಟೇಜ್ ಕಂಪೆನಿಯ ತಮಿಳು ನಾಟಕಗಳಲ್ಲಿಯೂ ಅಭಿನಯಿಸಿ ಜನಪ್ರಿಯರಾಗಿದ್ದರು. ಪಂಢರಿಬಾಯಿಯವರ ಖ್ಯಾತ ಉತ್ತುಂಗದಲ್ಲಿದ್ದಾಗ, ಇಡೀ ಕುಟುಂಬವನ್ನು ಸಾಕುವ ಹೊಣೆಗಾರಿಕೆ ಅವರ ಮೇಲೆ ಬಿತ್ತು. ಇಡೀ ಕುಟುಂಬವನ್ನು ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬಲಿಗೊಟ್ಟು, ಅಮ್ಮನಾಗಿ ಕಾಪಾಡಿದರು. ಕುಟುಂಬ ಎಲ್ಲರದೂ ಒಂದಿಂದು ದಾರಿಯಾದ ಮೇಲೆ ಅವರು ರಾಮರಾಯರನ್ನು ಪತಿಯಾಗಿ ಆರಿಸಿಕೊಂಡರು. 
1994ರ ಡಿಸೆಂಬರ್‍ನಲ್ಲಿ ಮದರಾಸಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಆಕಸ್ಮಾತ್ತಾಗಿ ತಮ್ಮ ಎಡಗೈಯನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಜರ್ಝರಿತವಾದ ಮಾನಸಿಕ ಸ್ಥಿತಿಯಿಂದ ಚೇತರಿಸಿಕೊಂಡ ಪಂಢರಿಬಾಯಿಯವರು ಕಿರುತೆರೆಯಲ್ಲಿ ಅಭಿನಯಿಸಲಾರಂಭಿಸಿದರು.

``ಬೆಳ್ಳಿಮೋಡ, ``ನಮ್ಮಮಕ್ಕಳು ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪುರಸ್ಕøತರಾದರು. ಸಪ್ತಭಾಷಾತಾರೆ ಪಂಢರಿಬಾಯಿಯವರು ಕನ್ನಡ ಚಿತ್ರೋದ್ದಿಮೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ರಾಜ್ಯಸರ್ಕಾರ ಈ ``ಅಮ್ಮ ನಿಗೆ 1994-95ನೇ ಸಾಲಿನ ಡಾ||ರಾಜಕುಮಾರ್ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿತು.  ``ಅಮ್ಮ 2002ರ ಮಾರ್ಚ್ 3ರಂದು ನಿಧನರಾದರು. ಆಗ ಅವರಿಗೆ 75 ವರ್ಷ ವಯಸ್ಸಾಗಿತ್ತು. 						  			     (ಎಸ್.ಎಸ್.ಎಂ.ಯು.; ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ